ಪಾಶುಪತ
ಒಂದು ಶೈವ ಪಂಥ; ಮಹಾಭಾರತದಲ್ಲಿ ಇದರ ಉಲ್ಲೇಖವಿದೆ. ಪ್ರಾರಂಭದಲ್ಲಿ ಇದಕ್ಕೆ ಪಶುಪತಿಯ ಮತವೆಂತಲೂ ಮುಂದೆ ಪುರಾಣಗಳಲ್ಲಿ ಉಲ್ಲೇಖವಾಗಿರುವಂತೆ ಶಿವ (ಪತಿ) ತನ್ನ ಸೃಷ್ಟಿಯಿಂದಾದ ಜೀವಿಗಳನ್ನು (ಪಶು) ಭವಬಂಧನದಿಂದ (ಪಾಶ) ಬಿಡಿಸುವ ಮತವೆಂತಲೂ ಇದರ ಅನುಯಾಯಿಗಳೇ ಪಾಶುಪತರೆಂತಲೂ ಹೇಳಿದೆ.

ಆದಿಯಲ್ಲಿ ಈ ಮತದ ಸ್ಥಾಪಕ ಶಿವನೆಂತಲೂ ಇದರ ತತ್ತ್ವಗಳನ್ನು ರಹಸ್ಯವಾಗಿ ಕೆಲವು ಋಷಿಗಳಿಗೆ ಮಾತ್ರ ತಿಳಿಸಿದನೆಂತಲೂ ಹೇಳಲಾಗಿದೆ. ಈ ತತ್ತ್ವಗಳು ಜನಸಾಮಾನ್ಯರನ್ನು ಹೇಗೆ ಮುಟ್ಟಿದವು ಎನ್ನಲಿಕ್ಕೆ ಒಂದು ಕಥೆಯಿದೆ. ಶಿವ ಒಮ್ಮೆ ಶ್ಮಶಾನವೊಂದರಲ್ಲಿ ಲಕುಲ ಅಥವಾ ದಂಡದ ಪಕ್ಕದಲ್ಲಿದ್ದ ಅನಾಮಧೇಯ ಶವವೊಂದರಲ್ಲಿ ಸೇರಿಕೊಂಡನೆಂದೂ ಹೀಗೆ ಶವವನ್ನು ಸೇರಿದ ಶಿವ ಕೆಲವು ಶಿಷ್ಯರನ್ನು ಆರಿಸಿಕೊಂಡು ಈ ಮತದ ತತ್ತ್ವಗಳನ್ನು ಬಿತ್ತರಿಸಿದನೆಂದೂ ಅವೇ ಪಾಶುಪತ ಅಥವಾ ಲಕುಲ ಪಂಥದ ತತ್ತ್ವಗಳಾದವೆಂದೂ ಹೇಳಲಾಗಿದೆ. ಕೌಶಿಕ, ಗಾರ್ಗೇಯ, ಕೌರುಶ(ಕೌರುಭಿ), ಮೈತ್ರೇಯ ಈ ನಾಲ್ಕು ಜನರೇ ಶಿವ ಆರಿಸಿಕೊಂಡ ಆ ಶಿಷ್ಯರು. ಮುಂದೆ ಇವರು ಪಾಶುಪತ ಪಂಥದ ಉಪಪಂಥಗಳನ್ನು ಗುಜರಾತು ಹಾಗೂ ರಾಜಸ್ತಾನಗಳಲ್ಲಿ ಸ್ಥಾಪಿಸಿದರು. ಹರ್ಷನ (648) ಕಾಲದಲ್ಲಿ ಈ ಪಂಥ ಸರ್ವತೋಮುಖವಾದ ಅಭಿವೃದ್ಧಿ ಹೊಂದಿ ಅನೇಕ ಶಾಖೆಗಳನ್ನು ಪಡೆಯಿತಾದರೂ ಮುಂದೆ ತನ್ನಲ್ಲಿನ ನೀತಿಭ್ರಷ್ಟತೆ ಹಾಗೂ ಅಧಿಕಾರ ವ್ಯಾಮೋಹಗಳಿಂದಾಗಿ ಇದು ಶಂಕರ ಮತ್ತು ಕುಮಾರಿಲರಿಂದ ತೀವ್ರ ಖಂಡನೆಗೆ ಗುರಿಯಾಯಿತು.

ಹನ್ನೊಂದನೆಯ ಶತಮಾನದ ವೇಳೆಗೆ ಪಾಶುಪತದ ಇನ್ನೊಂದು ಶಾಖೆಯಾದ ಕಾಳಾಮುಖ ಪಂಥದವರು ಪ್ರಮುಖರಾದರು. ಹಣೆಯಲ್ಲಿವರು ಕಪ್ಪು ತಿಲಕವನ್ನು ಇಡುತ್ತಿದ್ದುದರಿಂದ ಇವರು ಕಾಳಾಮುಖರೆಂದೇ ಪ್ರಸಿದ್ಧರಾದರು. ಮುಂದೆ ಈ ಶಾಖೆ ಕಾಪಾಲಿಕರು, ಕಾನ್‍ಫಟರು, ಅಘೋರರು ಮುಂತಾದ ವಾಮಾಚಾರ ಪಂಥಗಳಿಗೆ ದಾರಿ ಮಾಡಿಕೊಟ್ಟಿತು.
ಪಾಶುಪತ ಪಂಥದ ಸಿದ್ಧಾಂತ ಭೇದಾಭೇದ (ದ್ವೈತ-ಅದ್ವೈತ). ಈ ಸಿದ್ಧಾಂತವನ್ನು ಐದು ವರ್ಗಗಳಾಗಿ ವಿಂಗಡಿಸಲಾಗಿದೆ: 1. ಕಾರಣ: ಸೃಷ್ಟಿ, ಸ್ಥಿತಿ, ಲಯಗಳಿಗೆ ಕಾರಣವಾದುದು. 2. ಕಾರ್ಯ: ಜ್ಞಾನ, ಪ್ರಜ್ಞೆ, ಆತ್ಮಗಳಿಂದಾಗುವ ಪ್ರಯೋಜನ, 3. ಯೋಗ: ಪರಮಾತ್ಮನಲ್ಲಿ ಐಕ್ಯವಾಗುವ ವಿಧಾನ, 4. ವಿಧಿ: ಕರ್ಮಬಂಧನ, 5. ದುಃಖಾಂತ: ಪ್ರಾಪಂಚಿಕ ದುಃಖಗಳಿಂದ ದೂರವಾಗಿ ಮೋಕ್ಷ ಮಾರ್ಗವನ್ನು ಪಡೆದ ವಿಧಾನ.

ತಪಸ್ಸು, ಲೋಭ ಮತ್ತು ಕೋಪಗಳನ್ನು ಬಿಡುವುದು. ಕ್ಷಮಾಗುಣವನ್ನು ವರ್ಧಿಸುವುದು ಮತ್ತು ಪ್ರಣವವನ್ನು ಉಚ್ಚರಿಸುವುದು-ಇವೇ ಇದರ ಆರಂಭಿಕ ನಿಯಮಗಳು. ಈ ತತ್ತ್ವಗಳ ಮುಖ್ಯ ಉದ್ದೇಶ ಧ್ಯಾನ, ಮಂತ್ರಗಳಿಂದ ಪರಿಶುದ್ಧತೆ ಪಡೆದು ಊಧ್ರ್ವಮುಖನಾಗಿ ಪರಮಾತ್ಮನಲ್ಲಿ ಒಂದಾಗುವುದು. ಈ ಸಿದ್ಧಿಯನ್ನು ಪಡೆಯಲು ಪಾಶುಪತರು ಗೀತೆ, ನೃತ್ಯ, ಆರ್ಭಟ ಮತ್ತು ಗೂಳಿಗಳಂತೆ ಜೋರಾಗಿ ಕೂಗುವುದು ಇತ್ಯಾದಿ ಮಾರ್ಗಗಳನ್ನು ಅನುಸರಿಸುತ್ತಿದ್ದರು.
ಈ ತತ್ತ್ವಗಳ ಆಚರಣೆ ಕ್ರಮೇಣ ಕುಂಠಿತವಾಗಿ ಅವನತಿಗೊಳ್ಳಲಾರಂಭಿಸಿತು. ಈ ಪಂಥದವನೆನಿಸಿದ ಪಾಶುಪತರು ಮತ್ತು ಲಕುಲೀಶರು ಮಾಟಮಂತ್ರಗಳಲ್ಲಿ ತೊಡಗಿ ಋಜುಮಾರ್ಗ ತಪ್ಪಿದವರಾಗಿ, ಮದ್ಯ ಮಾಂಸಗಳ ಸೇವನೆಯಲ್ಲಿ ತೊಡಗಿ ವಾಮಾಚಾರಗಳಿಗಿಳಿದು ಕೊಲೆಗಳೆಸಗಿ, ನರಭಕ್ಷಕರಾಗಿ ದುರ್ಮಾರ್ಗ ಪ್ರವೃತ್ತರಾದುದರಿಂದ ಈ ಪಂಥ ಕ್ರಮೇಣ ಕ್ಷಯಿಸಿತು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ